ನಫೀಸಾ, ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ ! -ಮುನೀರ್ ಕಾಟಿಪಳ್ಳ

ನಫೀಸಾ,
ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ !
ಜಾತ್ರೆಯಲ್ಲಿ ಸಂತೆ ಅಂಗಡಿಗಳನ್ನು ಕಿತ್ತೆಸೆದರು
ಹಲಾಲ್ ವ್ಯಾಪಾರಕ್ಕೆ ಬಹಿಷ್ಕಾರ ಎಂದು ಕೂಗಿದರು
ತುಂಡು ಬಟ್ಟೆಯನ್ನು ಮುಂದಿಟ್ಟು ಕಾಲೇಜು ಗೇಟಲ್ಲಿ ತಡೆದರು
ಈಗ ಸಾಹಿತ್ಯದ ಜಾತ್ರೆಗೂ ನಾವು ಅನ್ಯರಂತೆ
ನಫೀಸಾ, ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ !
ನನ್ನಜ್ಜಿ ಭೂಮಾಲಕನ ಭತ್ತದ ಗದ್ದೆಯಲ್ಲಿ ಹಿಡಿ ಅಕ್ಕಿಗಾಗಿ ದುಡಿದಿದ್ದಳು
ನನ್ನಜ್ಜ ಘಟ್ಟದ ಮೇಲೆ ತೋಟದಲ್ಲಿ ದುಡಿಯುತ್ತಲೇ ಪ್ರಾಣ ತೆತ್ತಿದ್ದ
ಆಗ ಜೊತೆಗಿದ್ದವರು ಧರ್ಮ ಕೇಳಿರಲಿಲ್ಲ
ಅವರ ಕೈ ಇವರು, ಇವರ ಹೆಗಲು ಅವರು
ದುಡಿಮೆಗಾರರದ್ದೇ ಒಂದು ಧರ್ಮ, ಜೊತೆಯಾಗಿ ಈ ನೆಲವನ್ನು ಬಂಗಾರವಾಗಿಸಿದ್ದರು
ನಫೀಸಾ, ಈಗೇಕೆ ನಮ್ಮನ್ನು ಹೊರದಬ್ಬುತ್ತಾರೆ ಇಲ್ಲಿ !
ಮೊನ್ನೆ ಧಾರವಾಡದ ಜಾತ್ರೆಯಲ್ಲಿ ನಬೀಸಾಬರ ಕಲ್ಲಂಗಡಿ ಹೊಡೆದಾಗ
ನಿನ್ನೆ ನನ್ನೂರಿನಲ್ಲಿ ವ್ಯಾಪಾರಿ ಜಲೀಲನ ಹೊಟ್ಟೆ ಬಗೆದಾಗ..
ರಸ್ತೆ ತುಂಬಾ ಚೆಲ್ಲಿದ ಬಣ್ಣ ಹಸಿರಾಗಿರಲಿಲ್ಲ
ಅದು ಪೂರ್ತಿ ಕೆಂಪು ಕೆಂಪು ಕೆಂಪಾಗಿತ್ತು..
ನಫೀಸಾ, ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ !
ನನ್ನಜ್ಜಿ ದುಡಿದುಡಿದು ಚಿನ್ನ ಮಾಡಿದ ಮಣ್ಣಲ್ಲಿ
ನನ್ನಜ್ಜ ತಿರು ತಿರುಗಿ ಪ್ರಾಣ ಬಿಟ್ಟ ಈ ನೆಲದಲ್ಲಿ
ಈಗ ನನ್ನನ್ನು ತಡೆದು ನಿಲ್ಲಿಸಿ ಹೇಳಲಾಗುತ್ತಿದೆ
ನಿನಗಿಲ್ಲ ಪ್ರವೇಶವಿಲ್ಲ, ನೀನು ನಮ್ಮವನಲ್ಲ
ನನಗೊಂದೂ ಅರ್ಥವಾಗುತ್ತಿಲ್ಲ ನಫೀಸಾ,
ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ !
ಕೋಟಿ ಚೆನ್ನಯರ ದಂಡಿನಲ್ಲಿ, ಅಬ್ಬಕ್ಕನ ಸೈನ್ಯದಲ್ಲಿ
ಕೊನೆಗೆ ಶಿವಾಜಿಯ ಗೆರಿಲ್ಲಾ ಪಡೆಗಳಲ್ಲಿ
ನನ್ನ ಅಜ್ಜಂದಿರು ಇದ್ದರು
ಆಗ ಅವರನ್ನು ಯಾರೂ ಮುಸಲರೆಂದು ಅನುಮಾನಿಸಿರಲಿಲ್ಲ
ರಾಮ ಪ್ರಸಾದ, ಅಶ್ಫಖುಲ್ಲಾನ ಕೈ ಹಿಡಿದೇ ಫರಂಗಿಗಳ ಗಲ್ಲುಗಂಭದಲ್ಲಿ ನೇತಾಡಿದ್ದ
ಚಿರಸ್ಮರಣೆಯ ಚಿರುಕಂಡ, ಅಬೂಬಕ್ಕರನ ಎದೆಗೆ ಒರಗಿಯೇ ನೇಣು ಕುಣಿಕೆಗೆ ಕೊರಳೊಡ್ಡಿದ್ದ
ನಫೀಸಾ,ಈಗೇಕೆ ನಮ್ಮನ್ನು ಹೊರದಬ್ಬುತ್ತಾರೆ ಇಲ್ಲಿ !
ಟಿಪ್ಪುವಿನ ಲಾವಣಿಯಲ್ಲಿ, ಬಬ್ಬರ್ಯನ ಪಾಡ್ದನದಲ್ಲಿ
ಈ ನೆಲದ ಜನಪದರ ಕತೆಗಳಲ್ಲಿ
ನನ್ನಜ್ಜಂದಿರ ತ್ಯಾಗದ ಕತೆಗಳಿವೆ, ಅವರ ನೋವು ನಲಿವಿನ ಮಿಡಿತಗಳಿವೆ
ಅವರ ಮೊಮ್ಮಗ ನಾನು
ಸಾಹಿತ್ಯದ ಜಾತ್ರೆಯಿಂದಲೂ ಈಗ ಹೊರದಬ್ಬಿಸಿಕೊಂಡಿದ್ದೇನೆ
ಹೊಸ ಭಾರತದ ನವ ಬಹಿಷ್ಕೃತ ನಾನು
ನಫೀಸಾ, ನನ್ನದೆ ಕತೆ ಬರೆಯುತ್ತೇನೆ ಕೇಳು
ಅದು ಮಾತ್ರ ನಿಗಿ ನಿಗಿ ಕೆಂಡ....
ಮುನೀರ್ ಕಾಟಿಪಳ್ಳ

ವಿಡಿಯೋ :ಆಡಿಯೋ:


Writer : ಮುನೀರ್ ಕಾಟಿಪಳ್ಳ
Audio by : ಸುರಭೀ ರೇಣುಕಾಂಭೀಕೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು